ಬುದ್ಧಘೋಷ
ಪಾಳೀ ಬೌದ್ಥವಾಙ್ಮಯದಲ್ಲಿ ಪ್ರಮುಖ ಹೆಸರು. ವೇದಾಂತಕ್ಕೆ ಶಂಕರಾಚಾರ್ಯರಂತೆ ತ್ರಿಪಿಟಕಗಳಿಗೆ ಬುದ್ಧಘೋಷಾಚಾರ್ಯ. ಈತ ನಾಲ್ಕನೆಯ ಶತಮಾನದ ಪರಾರ್ಧದಲ್ಲಿ ಅಥವಾ ಐದನೆಯ ಶತಮಾನದ ಪೂರ್ವಾರ್ಧದಲ್ಲಿ ಇದ್ದನೆಂದು ತಿಳಿದುಬರುತ್ತದೆ. ಹದಿನಾಲ್ಕನೆಯ ಶತಮಾನದಲ್ಲಿ ಬರ್ಮಾ ದೇಶದ ಮಹಾಮಂಗಳನೆಂಬ ಭಿಕ್ಷು ಬುದ್ಧ ಘೋಸುಪ್ಪತ್ತಿ ಎಂಬ ಹೆಸರಿನಲ್ಲಿ ಈತನ ಜೀವನ ಚರಿತ್ರೆಯನ್ನು ಪಾಳೀಭಾಷೆಯಲ್ಲಿ ರಚಿಸಿದ್ದಾನೆ. ಇದರಿಂದ ಕೆಲವು ವಿವರಗಳು ದೊರೆಯುವುವಾದರೂ ಬಹುತೇಕವಾಗಿ ಇದು ಕಲ್ಪಿತ ಗ್ರಂಥ. ಸಂಪ್ರದಾಯದ ಪ್ರಕಾರ ಈತ ಮಗಧದೇಶದ ಬ್ರಾಹ್ಮಣನೆಂದೂ, ಬೋಧಿಮಂಡದ ಸಮೀಪದಲ್ಲೇ ಈತನ ಜನ್ಮವಾಯಿತೆಂದೂ ಹೇಳುತ್ತಾರೆ. ಆಂಧ್ರಪ್ರದೇಶದ ದೊರಂಡ ಖೇಟಕಗ್ಗಾಮ ಎಂಬುದು ಈತನ ಸ್ವಗ್ರಾಮವೆಂದು ಮತಭೇದವಿದೆ. ಈತ ಭಿಕ್ಷುವಾಗುವ ಮುನ್ನ ವೈದಿಕ ವಾಙ್ಮಯದಲ್ಲಿ ಮಹಾಪಂಡಿತನಾಗಿದ್ದನೆಂದೂ, ಪಾತಂಜಲ ಯೋಗ ಸಿದ್ಧಿಸಿಕೊಂಡಿದ್ದನೆಂದೂ, ರೇವತನೆಂಬ ಸ್ಥವಿರನಿಂದ ಈತ ಬೌದ್ಧಧರ್ಮದಲ್ಲಿ ದೀಕ್ಷೆ ತಳೆದು ಭಿಕ್ಷುವಾದನೆಂದೂ ವಿವರಗಳಿವೆ. ಭಿಕ್ಷುವಾದೊಡನೆ ಜಾಣೋದಯ (ಜ್ಞಾನೋದಯ) ವೆಂಬ ಪಾಳೀಗ್ರಂಥ ರಚಿಸಿದಂತೆ ತೋರುತ್ತದೆ.

	ಆ ಕಾಲಕ್ಕೆ ತ್ರಿಪಿಟಕವಾಙ್ಮಯದ ಟೀಕಾಭಾಗ ಭಾರತದಲ್ಲಿ ಪ್ರಣಷ್ಟವಾಗಿತ್ತು, ಸಿಂಹಳದೇಶದಲ್ಲಿ ಮಾತ್ರ ಪ್ರಚಲಿತವಾಗಿತ್ತು. ಈ ಗ್ರಂಥಗಳ ಕ್ರೋಡೀಕರಣಕ್ಕಾಗಿ ಬುದ್ಧಘೋಷ ಸಿಂಹಳಕ್ಕೆ ತೆರಳಿದ. ಅಲ್ಲಿ ಅಶೋಕನ ಕಾಲಕ್ಕೆ ಬೌದ್ಧ ಧರ್ಮ ಬಂದನಂತರ ಸಿಂಹಳಭಾಷೆಯಲ್ಲಿ ಮಹಾಆಟ್ಠಕಥಾ, ಮಹಾಪಚ್ಚರಿಯ ಅಟ್ಠಕಥಾ, ಕುರುಂದಿ ಅಟ್ಠಕಥಾ ಎಂಬ ಟೀಕೆಗಳು ಪ್ರಕಟವಾಗಿದ್ದುವು. ಮಹಾನಾಮನೆಂಬ ರಾಜನ ಕಾಲದಲ್ಲಿ ಬುದ್ಧಘೋಷ ಸಿಂಹಳಕ್ಕೆ ಬಂದು ಅನೂರಾಧಪುರದ ಮಹಾವಿಹಾರದಲ್ಲಿ ಪಂಡಿತರನ್ನು ಕಂಡು ಅವರಿಗೆ ತನ್ನ ಸಾಮಥ್ರ್ಯ ತೋರಿಸಿ ಅವರಿಂದ ಮಹಾಅಟ್ಠ ಕಥೆಯನ್ನು ಪಡೆದು ಅದನ್ನು ಮಾಗಧೀಭಾಷೆಗೆ (ಪಾಳೀಭಾಷೆಗೆ) ಪರಿವರ್ತಿಸಿದ. ಮಹಾ ವಿಹಾರದ ಭಿಕ್ಷುಗಳು ಈತನ ಸಾಮಥ್ರ್ಯ ಪರೀಕ್ಷೆ ಮಾಡಲು "ಶಿಲೆ ಪರೆಟ್ಠಾಯ..." ಎಂದು ಆರಂಭವಾಗುವ ಬುದ್ಧವಚನವನ್ನು ಅನುವಾದ ಮಾಡುವಂತೆ ಹೇಳಿದರಂತೆ. ಆ ಒಂದು ಶ್ಲೋಕಕ್ಕೆ ಅನುವಾದರೂಪವಾಗಿ ಬುದ್ಧಘೋಷ ವಿಶುದ್ಧಿ ಮಾರ್ಗ (ವಿಸುದ್ಧಿಮಗ್ಗ) ಎಂಬ ಅದ್ಭುತ ಪ್ರಕರಣ ಗ್ರಂಥವನ್ನು ವಿಸ್ತಾರವಾಗಿ ರಚಿಸಿ ಅವರನ್ನು ಸ್ತಬ್ಧಗೊಳಿಸಿದನಂತೆ. ಅಂತೂ ಈ ಗ್ರಂಥ ಪಾಳೀಸಾಹಿತ್ಯದ ಮುಕ್ತಾಫಲಕಗಳಲ್ಲೊಂದು ಎಂಬುದು ನಿರ್ವಿವಾದ. ಇದರಲ್ಲಿ ಶೀಲ, ಪ್ರಜ್ಞೆ, ಸಮಾಧಿಗಳ ಸಂಪೂರ್ಣ ವಿವರಣೆಯಿದೆ. ಬೌದ್ಧದರ್ಶನದ ದಿಗ್ದರ್ಶನ ಇಲ್ಲಿ ದೊರೆಯುತ್ತದೆ.

	ವಿನಯಪಿಟಕದ ಮೇಲೆ ಸಮನ್ತ ಪಾಸಾದಿಕಾ, ದೀಘನಿಕಾಯದ ಮೇಲೆ ಸುಮಂಗಲ ವಿಲಾಸಿನೀ, ಮಜಯಮನಿಕಾಯದ ಮೇಲೆ ಪ್ರಪಂಚಸೂದನೀ, ಸಂಯುಕ್ತ ನಿಕಾಯದ ಮೇಲೆ ಸಾರಸ್ಥಪ್ಪಕಾಸಿನೀ, ಅಂಗುತ್ತರನಿಕಾಯದ ಮೇಲೆ ಮನೋರಥ ಪೂರಣಿ-ಇವು ಬುದ್ಧಘೋಷಾಚಾರ್ಯನ ಪ್ರಮುಖ ವ್ಯಾಖ್ಯಾನಗಳು. ಪಾತಿಮೋಕ್ಖದ ಮೇಲೆ ಕಂಖಾವಿತರಣಿ ಎಂಬ ವ್ಯಾಖ್ಯಾನವನ್ನೂ ಅಭಿಧಮ್ಮಪಿಟಕದ ಏಳೂ ಗ್ರಂಥಗಳ ಮೇಲೆ ಒಟ್ಟಾರೆ ಪರಮತ್ಥಪ್ಪಕಾಸಿನಿಯೆಂಬ ವ್ಯಾಖ್ಯಾನವನ್ನೂ ಜಾತಕದ ಮೇಲೊಂದು ಅಟ್ಠಕಥೆಯನ್ನು (ವ್ಯಾಖ್ಯಾನ) ಹೇಳುತ್ತದೆ. ಧಮ್ಮಸಂಗಣಯೆಂಬ ಅಭಿಧಮ್ಮನ ಪ್ರಕರಣ ಗ್ರಂಥದ ಮೇಲೆ ಅತ್ಥಸಾಲಿನಿ, ವಿಭಂಗದ ಮೇಲೆ ಸಂಮೋಹ ವಿನೋದನೀ ಇವೂ ಬುದ್ಧಘೋಷಕರ್ತೃಕವೆಂದು ಪ್ರಸಿದ್ಧವಾಗಿವೆ. ಪದ್ಯಚೂಡಾ ಮಣಿಯೆಂಬ ಹತ್ತು ಸರ್ಗಗಳ ಸಂಸ್ಕøತ ಮಹಾಕಾವ್ಯವನ್ನು ಬುದ್ಧಘೋಷನೇ ರಚಿಸಿದನೆಂದು ಹೇಳುತ್ತಾರೆ. ಇದು ವಿವಾದಾಸ್ಪದವಾದದ್ದು.		
 (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ